ಬಂದೋಪಾಧ್ಯಾಯ, ತಾರಾಶಂಕರ
	1896-1971. ಬಂಗಾಳೀ ಭಾಷೆಯ ಪ್ರಸಿದ್ಧ ಕಾದಂಬರಿಕಾರರು, ಜ್ಞಾನಪೀಠ ಪ್ರಶಸ್ತಿ ವಿಜೇತರು. 1898ರ ಜುಲೈ 23ರಂದು ಪಶ್ಚಿಮ ಬಂಗಾಳದ ಬೀರ್‍ಭೂಮ್ ಜಿಲ್ಲೆಯ ಲಾಭ್‍ಪುರದಲ್ಲಿ ಒಂದು ಜಮೀನುದಾರಿ ಕುಟುಂಬದಲ್ಲಿ ಜನಿಸಿದರು. ತಂದೆ ಹರಿದಾಸ್ ಬಂದೋಪಾಧ್ಯಾಯ, ತಾಯಿ ಪ್ರಭಾವತಿದೇವಿ. ಎಂಟನೆಯ ವಯಸ್ಸಿಗೇ ತಂದೆಯವರನ್ನು ಕಳೆದುಕೊಂಡ ತಾರಾಶಂಕರರು ತಾಯಿ ಹಾಗೂ ಸೋದರತ್ತೆಯ ಪೋಷಣೆಯಲ್ಲಿ ಬೆಳೆದರು. ತಾಯಿ ಪಟಣಾದ ಸುಸಂಸ್ಕøತ ಮನೆತನದಿಂದ ಬಂದವರು. ಸಂಪ್ರದಾಯಸ್ಥರು. ಇಂಗ್ಲಿಷ್ ಸಂಪರ್ಕವೆಂದರೆ ಮೂಗು ಮುರಿಯುತ್ತಿದ್ದ ಹೊತ್ತಿನಲ್ಲಿ ಪ್ರಭಾವತಿದೇವಿಯವರ ಮನೆತನ ಇಂಗ್ಲಿಷ್ ಶಿಕ್ಷಣವನ್ನು ರೂಢಿಸಿಕೊಂಡಿತ್ತು. ಹಾಗಾಗಿ ಪ್ರಭಾವತಿದೇವಿಯವರು ತಮ್ಮ ಮಗನೂ ಅಂಥ ಶಿಕ್ಷಣ ಪಡೆಯಲಿ ಎಂದು ಬಯಸಿದರು. ತಾರಾಶಂಕರು ಸ್ಥಳೀಯ ಜದಬ್‍ಲಾಲ್ ಇಂಗ್ಲಿಷ್ ಪೌಢಶಾಲೆಯಲ್ಲಿ ಓದಿ 1916ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿ ಕಾಲೇಜು ವ್ಯಾಸಂಗ ಪಡೆಯಲು ಕಲ್ಕತ್ತಕ್ಕೆ ಹೋದರು. ಸೇಂಟ್ ಜೇವಿಯರ್ ಕಾಲೇಜು, ಸೌತ್ ಸಬರ್ಬನ್ ಕಾಲೇಜು (ಈಗ ಅಶುತೋಷ್ ಕಾಲೇಜು)ಗಳಲ್ಲಿ ವ್ಯಾಸಂಗ ನಡೆಸಿದರಾದರೂ ತೀವ್ರ ಅನಾರೋಗ್ಯದ ನಿಮಿತ್ತ ಶಿಕ್ಷಣವನ್ನು ಮುಂದುವರಿಸಲಾಗದೆ ತಮ್ಮ ಹಳ್ಳಿಗೆ ಮರಳಿದರು. ಕೆಲವು ದಿನಗಳ ಕಾಲ ಸಮಾಜ ಸೇವಕರಾಗಿ ದುಡಿದರು. ಆ ವೇಳೆಗಾಗಲೇ ಸ್ವಾತಂತ್ರ್ಯ ಆಂದೋಲನದ ಕಿಡಿ ಭಾರತದ ಎಲ್ಲೆಡೆ ಹೊತ್ತಿಕೊಳ್ಳಲಾರಂಭಿಸಿತ್ತು. ಪಶ್ಚಿಮ ಬಂಗಾಳದಲ್ಲಿ ಅದರ ರಭಸ ಇನ್ನೂ ಹೆಚ್ಚಾಗಿತ್ತು. ಬಿಸಿರಕ್ತದ ತರುಣ ತಾರಾಶಂಕರರು ಉಗ್ರಗಾಮಿಗಳ ಪಂಥ ಸೇರಿದರು. ಈ ಸಂದರ್ಭದಲ್ಲಿ ಇವರು ನಾನಾ ಊರುಗಳನ್ನು ಸುತ್ತಿದರು, ಅಲೆದರು, ಜನರಲ್ಲಿ ಜಾಗೃತಿ ಮೂಡಿಸಲು ಹೋರಾಡಿದರು. ಇದರಿಂದಾಗಿ ಹಳ್ಳಿಗಾಡಿನ ಕ್ರೂರ ಬದುಕಿನ ಅರಿವು ತಾರಾಶಂಕರಲ್ಲಿ ಉಂಟಾಯಿತು. ಗ್ರಾಮೀಣ ಬದುಕಿನ ಹಿಂಸೆ, ನೋವು, ಅಜ್ಞಾನ, ಮೌಢ್ಯ, ಶೋಷಣೆ ಕುರಿತು ಚಿಂತನೆಯಲ್ಲಿ ತೊಡಗಿದರು. ಇದು ಮುಂದಿನ ಇವರ ಸಾಹಿತ್ಯ ಕೃಷಿಗೆ ನಾಂದಿಯಾಯಿತು. 

ಮನೆಯ ಸುಸಂಸ್ಕøತ ವಾತಾವರಣದ ಸಮೃದ್ಧ ಜನಪದ ಸಾಹಿತ್ಯ ಪರಿಸರ-ಇವು ತಾರಾಶಂಕರರು ಸಾಹಿತ್ಯ ರಚನೆಯಲ್ಲಿ ತೊಡಗಿಸಲು ಪ್ರೇರಣೆ ನೀಡಿದವು. ಇವರ ಆರಂಭದ ಕವಿತಾರಚನೆಗಳನ್ನು ಒಳಗೊಂಡ ಪ್ರಥಮ ಕವನ ಸಂಕಲನ `ತ್ರಿಪತ್ರ` 1926ರಲ್ಲಿ ಪ್ರಕಟವಾಯಿತು. ಆದರೆ ಅದು ಅಷ್ಟಾಗಿ ಹೆಸರು ಮಾಡಲಿಲ್ಲ. ಈ ಮಧ್ಯೆ ಮನೆಯವರ ಒತ್ತಾಯದ ಮೇರೆಗೆ ಕಲ್ಲಿದ್ದಲು ಉದ್ದಿಮೆಯಲ್ಲಿ ಕೆಲದಿನಗಳನ್ನು ಕಳೆದರಾದರೂ ಆ ಕೆಲಸ ಇವರ ಮನಸ್ಸಿಗೆ ಒಗ್ಗಲಿಲ್ಲವಾಗಿ ಅದನ್ನೂ ತ್ಯಜಿಸಿದರು. ಮತ್ತೆ ಸಾಹಿತ್ಯ ರಚನೆಗೆ ತೊಡಗಿದರು. ಈ ಬಾರಿ `ಮರಾಠ ತರ್ಪಣ್` ಎಂಬ ನಾಟಕವನ್ನು ರಚಿಸಿದರು. ಕಲ್ಕತ್ತದ ಪ್ರಸಿದ್ಧ ನಾಟಕ ಕಂಪನಿಯೊಂದು ಈ ನಾಟಕವಾಡಲು ತಿರಸ್ಕರಿಸಿತು. ಈ ಘಟನೆಯಿಂದಾಗಿ ತಾರಾಶಂಕರರು ತುಂಬ ನಿರಾಶರಾದರು. ನಾಟಕದ ಹಸ್ತಪ್ರತಿಯನ್ನು ಸುಟ್ಟು ಹಾಕಿದರು. ಇನ್ನು ಮುಂದೆ ಬರೆಯಬಾರದೆಂದು ತೀರ್ಮಾನಿಸಿದರು. ಕೆಲವು ದಿನಗಳು ಕಳೆದ ಅನಂತರ `ಕಲಿಕಲಮ್ ಪ್ರತಿಕೆಯಲ್ಲಿ ಪ್ರಕಟವಾದ ಪ್ರೇಮೇಂದ್ರಮಿತ್ರ, ತೈಲಜಾನಂದ ಮುಖರ್ಜಿ ಎಂಬ ಲೇಖಕರ ಕಥೆಗಳನ್ನು ಓದುವ ಸುಯೋಗ ಇವರಿಗೆ ಆಕಸ್ಮಿಕವಾಗಿ ಲಭಿಸಿತು. ಆ ಕಥೆಗಳ ಚೆಲುವಿಗೆ ಮನಸೋತ ತಾರಾಶಂಕರರಲ್ಲಿ ಪುನಃ ಸಾಹಿತ್ಯಾಸಕ್ತಿ ಪುಟಿಯಿತು. ತಮ್ಮ ಬಿಡುವಿನ ವೇಳೆಯ ಹವ್ಯಾಸವಾಗಿ ಸಾಹಿತ್ಯ ರಚನೆಯಲ್ಲಿ ಮಗ್ನರಾಗಿ ಒಂದೊಂದಾಗಿ ಕಥೆಗಳನ್ನು ಪ್ರಕಟಿಸತೊಡಗಿದರು. ಆದರೆ ಪೂರ್ಣವಾಗಿ ಸಾಹಿತ್ಯ ವೃತ್ತಿಯಲ್ಲಿ ತೊಡಗುವುದೇ ಅಥವಾ ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುವುದೇ ಎಂಬ ಡೋಲಾಯಮಾನ ಪರಿಸ್ಥಿತಿಯಲ್ಲಿ ತಾರಾಶಂಕರರು ಸಿಲುಕಿದ್ದಾಗ ಅಸಹಕಾರ ಚಳವಳಿಯ ನಿಮಿತ್ತ 1930ರಲ್ಲಿ ಬಂಧಿತರಾದರು. ಆಗ ನಾಲ್ಕು ತಿಂಗಳ ಸೆರೆವಾಸ ಅನುಭವಿಸಿದರು. ಜೈಲಿನಿಂದ ಹೊರಬಂದಾಗ ಅವರ ರಾಜಕೀಯ ಸಾಮಾಜಿಕ ಧೋರಣೆಯೇ ಬದಲಾಗಿತ್ತು. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಹೊಲಸನ್ನು ಕಂಡು ಸಾಹಿತ್ಸಾಧನೆಯ ಮೂಲಕ ನಾನು ನನ್ನ ತಾಯ್ನಾಡಿಗೆ ಸೇವೆ ಸಲ್ಲಿಸುತ್ತೇನೆಂದು ಸಾರ್ವಜನಿಕವಾಗಿ ಘೋಷಿಸಿಕೊಂಡರು. ಅಂದಿನಿಂದ ಸಂಪೂರ್ಣವಾಗಿ ಸಾಹಿತ್ಯ ರಚನೆಗೆ ತಮ್ಮನ್ನು ತಾವು ಅರ್ಪಿಸಿಕೊಂಡರು.

ತಾರಾಶಂಕರರು ಒಟ್ಟು 134 ಕೃತಿಗಳನ್ನು ರಚಿಸಿದ್ದಾರೆ. ಇವರಲ್ಲಿ 56 ಕಾದಂಬರಿಗಳು. 43 ಕಥಾಸಂಕಲನಗಳು, 9 ನಾಟಕಗಳು, 4 ಸಂಪುಟಗಳು ಆತ್ಮ ಚರಿತ್ರೆ, 3 ಪ್ರಬಂಧ ಸಂಗ್ರಹ, 1 ಕವನ ಸಂಕಲನ, 1 ಪ್ರವಾಸ ಕಥನ, ಇತರ ಕೃತಿಗಳು 17 ಸಣ್ಣ ಕಥೆಗಳನ್ನು ಪ್ರಕಟಿಸುವುದರ ಮೂಲಕ ಇವರು ಬಂಗಾಳಿ ಸಾಹಿತ್ಯ ರಂಗದಲ್ಲಿ ಹೆಸರು ಮಾಡತೊಡಗಿದರು. ಕಲಿಕಲಮ್, ಕಲ್ಲೋಲ್, ಉಪಾಸನೆ, ಧೂಪ್‍ಛಾಯಾ ಬಂಗಶ್ರೀ ಮುಂತಾದ ಆ ಕಾಲದ ಪ್ರಸಿದ್ಧ ಪತ್ರಿಕೆಗಳಲ್ಲಿ ಇವರ ಅನೇಕ ಸಣ್ಣಕಥೆಗಳು ಪ್ರಕಟವಾದವು. ಇವರ ಆರಂಭದ ಕಥೆ `ರಸಕಲಿ` ಕಲ್ಲೋಲ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಇವರ ಬಹುಪಾಲು ಕಥೆಗಳಲ್ಲಿ ಜಮೀನುದಾರಿ ವ್ಯವಸ್ಥೆಯ ಏಳುಬೀಳಿನ ಚಿತ್ರಣ ಕಂಡುಬರುತ್ತದೆ. ಜಲಸಾಫರ್, ರಾಯ್‍ಬರಿ, ಸಾರೆಸಾತ್ ಸುಂದರ್ ಜಮೀನ್‍ದಾರ್ ಎಂಬ ಕಥೆಗಳು ಮೇಲಿನ ಹೇಳಿಕೆಗೆ ನಿದರ್ಶನಗಳಾಗಿವೆ. ಮಾನವ ಸ್ವಭಾವದ ಹಲವು ಮುಖಗಳ ಸೂಕ್ಷ್ಮಪರಿಚಯವನ್ನೂ ಇವರ ಕಥೆಗಳು ಸಮರ್ಥವಾಗಿ ಮಾಡಿಕೊಡುತ್ತವೆ. ಬೇದಿನಿ (ಅಲೆಮಾರಿ ಹೆಣ್ಣು) ಮತ್ತು ತರಣಿವಜ್‍ಇ (ಅಂಬಿಗ) ಎಂಬ ಕಥೆಗಳಲ್ಲಿ ಪ್ರೇಮ ಹಾಗೂ ಸ್ವಾರ್ಥದ ಬೆತ್ತಲೆತನವನ್ನು ಅನಾವರಣಗೊಳಿಸಿದ್ದಾರೆ. ಬೇದಿನಿ ಇವರ ಅತ್ಯುತ್ತಮ ಸಣ್ಣ ಕಥೆಗಳಲ್ಲೊಂದೆಂದು ಪ್ರಸಿದ್ಧವಾಗಿದೆ.

ತಾರಾಶಂಕರರ ಸಾಹಿತ್ಯದ ಪೂರ್ಣ ಸಿದ್ಧಿಯನ್ನು ನಾವು ಕಾಣುವುದು ಇವರ ಕಾದಂಬರಿಗಳಲ್ಲಿ. ಬಂಗಾಳದ ಗ್ರಾಮೀಣ ಬದುಕನ್ನು ಅದರಲ್ಲಿಯೂ ಭೀರ್‍ಭೂಮ್ ಜಿಲ್ಲೆಯ ಪರಿಸರವನ್ನು ಸಮಗ್ರವಾಗಿ ಈ ಕಾದಂಬರಿಗಳಲ್ಲಿ ಸೆರೆಹಿಡಿದ್ದಾರೆ. ಹಳ್ಳಿಯ ಬದುಕಿನ ಸೂಕ್ಮ ಸಂವೇದನೆಗಳನ್ನು ಅರ್ಥಮಾಡಿಕೊಂಡು ಬರೆದದ್ದರಿಂದ, ಬರೆದದ್ದನ್ನು ಕಲೆಯಾಗಿ ಮಾರ್ಪಡಿಸುವ ಶಕ್ತಿ ಇವರಿಗಿದ್ದದ್ದರಿಂದ ಇವರ ಕಾದಂಬರಿಗಳು ಬಂಗಾಳಿ ಸಾಹಿತ್ಯಪ್ರಿಯರ ಮನಸ್ಸನ್ನು ಮುಟ್ಟಿದವು. ಇವರು ಬರೆಯುವ ಕಾಲಕ್ಕಾಗಲೇ ರವೀಂದ್ರನಾಥ ಠಾಕೋರ್ ಮತ್ತು ಶರಶ್ಚಂದ್ರ ಚಟರ್ಜಿ ಬಂಗಾಳೀ ಕಾದಂಬರಿಯ ಮಹಾನ್ ಲೇಖಕರೆಂದು ಖ್ಯಾತರಾಗಿದ್ದರು. ಆದರೆ ಅವರಿಬ್ಬರೂ ಆಧುನಿಕ ಸಂವೇದನೆಗಳನ್ನು ಪಾಶ್ಚಾತ್ಯ ಸಾಹಿತ್ಯದ ಪರಿಚಯವನ್ನು ಪಡೆದವರಾಗಿದ್ದರು. ಈ ಹಿನ್ನಲೆಯಲ್ಲಿ ಹೇಳುವುದಾದರೆ ತಾರಾಶಂಕರರು ಸಂಪ್ರದಾಯ ನಿಷ್ಠ ಬರೆಹಗಾರರು. ಯಾವುದೇ ಅನ್ಯಸಾಹಿತ್ಯಿಕ ಪ್ರಭಾವಗಳಿಗೆ ಒಳಗಾಗದೆ ಬರೆದವರು. ಇವರ ಸಾಹಿತ್ಯ ಸೃಷ್ಟಿಯ ತಾಯಿಬೇರು ಗ್ರಾಮೀಣ ಪರಿಸರದಲ್ಲಿ ಬೇರೂರಿದೆ. ಕಾದಂಬರಿಕಾರರಾಗಿ ಶರಶ್ಚಂದ್ರರ ಅನಂತರದ ದೊಡ್ಡ ಹೆಸರೆಂದರೆ ತಾರಾಶಂಕರರದು ಎಂಬ ಅಭಿಪ್ರಾಯ ವಿಮರ್ಶಕರಲ್ಲಿದೆ. ಇವರ ಪ್ರಥಮ ಕಾದಂಬರಿ ಚೈತಾಲಿ ಫೂರ್ಣಿ (ಚೈತ್ರದ ಬಿರುಗಾಳಿ) 1931ರಲ್ಲಿ ಪ್ರಕಟವಾಯಿತು. ಒಂದು ಹಳ್ಳಿಯ ಅಧಃಪತನದ ಕಥೆಯನ್ನು ಈ ಕಾದಂಬರಿ ನಿರೂಪಿಸುತ್ತದೆ. ಇವರಿಗೆ ಖ್ಯಾತಿಯನ್ನು ತಂದುಕೊಟ್ಟ ಮಹಾ ಕಾದಂಬರಿ (ಎಪಿಕ್ ನಾವೆಲ್) ಧಾತ್ರಿ ದೇವತ. ಇದು 1939ರಲ್ಲಿ ಪ್ರಕಟವಾಯಿತು. ಕಾದಂಬರಿಕಾರರ ಜೀವನಚರಿತ್ರೆ ಎನ್ನುವಷ್ಟರ ಮಟ್ಟಿಗೆ ಇವರ ವೈಯುಕ್ತಿಕ ಜೀವನದ ವಿವರಗಳು ಈ ಕಾದಂಬರಿಯಲ್ಲಿ ತುಂಬಿಕೊಂಡಿವೆ. ಗಾನ ದೇವತಾ(1943) ಮತ್ತು ಪಂಚ ಗ್ರಾಮ (1944) ಎಂಬ ಕಾದಂಬರಿಗಳು ಧಾತ್ರಿದೇವತಾ ಕಾದಂಬರಿಯ ಮುಂದುವರಿದ ಭಾಗಗಳು. ಗ್ರಾಮ ಪಂಚಾಯಿತಿ ವ್ಯವಸ್ಥೆಯ ಅಧಃಪತನದ ಚಿತ್ರಣ ಈ ಮೂರು ಕಾದಂಬರಿಗಳಲ್ಲೂ ಪಡಿಮೂಡಿದೆ. ಹಳ್ಳಿಯ ದಲಿತ ಹಾಡುಗಾರನೊಬ್ಬನ ಜೀವನವನ್ನು ವಸ್ತುವಾಗುಳ್ಳ ಕಾದಂಬರಿ `ಕವಿ` (1944). ಇದು ಬಂಗಾಳಿ ಸಾಹಿತ್ಯದ ರಮ್ಯ ಪಂಥದ ಅತ್ಯುತ್ತಮ ಕೃತಿ ಎಂದು ಪ್ರಸಿದ್ಧವಾಗಿದೆ. ಇವರ ಇನ್ನೊಂದು ಪ್ರಸಿದ್ಧ ಕೃತಿ ಹನ್ಸೂಲಿ ಬನ್ನರ್ ಉಪಕಾಥಾ(1951). ಈ ಕಾದಂಬರಿಯಲ್ಲಿ ಕಾಹರ್ಸ್ ಎಂಬ ದಲಿತವರ್ಗಕ್ಕೆ ಸೇರಿದ ಭೂ ಕೂಲಿಕಾರರ ಬದುಕಿನ ದಾರುಣತೆ ಚಿತ್ರಣಗೊಂಡಿದೆ. ಸಂದಿಪನ್ ಪಾಠಶಾಲಾ (1946), ಬಿಚಾರಕ್ (1957) ಯೋಗಭ್ರಷ್ಟ (1961) ಇವು ಇತರ ಕೆಲವು ಮುಖ್ಯ ಕೃತಿಗಳು. ಕಲ್ಕತ್ತನಗರದ ನರಕ ಜೀವನವನ್ನು ಚಿತ್ರಿಸುವ ಶತಾಬ್ದಿರ್ ಮೃತ್ಯು (ಶತಮಾನದ ಸಾವು) ಎಂಬ ಇವರ ಕೊನೆಯ ಕಾದಂಬರಿ ಇವರ ನಿಧನಾನಂತರ (14-9-1971) ಪ್ರಕಟವಾಯಿತು.

ಇವರಿಗೆ ಅನೇಕ ಗೌರವಗಳು, ಪ್ರಶಸ್ತಿಗಳು ದೊರೆಕಿವೆ. 1955ರಲ್ಲಿ ಪಶ್ಚಿಮ ಬಂಗಾಳ ಸರ್ಕಾರ ರವೀಂದ್ರ ಸ್ಮಾರಕ ಬಹುಮಾನ ನೀಡಿ ಗೌರವಿಸಿದೆ. 1956ರಲ್ಲಿ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಭಾರತ ಸರ್ಕಾರ 1962ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿತು. 1966ರಲ್ಲಿ ನಾಗಪುರದಲ್ಲಿ ನಡೆದ ಅಖಿಲ ಭಾರತ ವಂಗ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1968ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯ ಮತ್ತು ಜಾದವಪುರ ವಿಶ್ವವಿದ್ಯಾಲಯಗಳು ಗೌರವ ಡಿ.ಲಿಟ್. ಪ್ರಶಸ್ತಿ ನೀಡಿವೆ. ಅದೇ ವರ್ಷದ ಭಾತರ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ